ತಳಿಶಾಸ್ತ್ರ
	ಜೀವವಿಜ್ಞಾನದ ಪ್ರಮುಖ ಶಾಖೆಗಳಲ್ಲೊಂದು (ಜೆನೆಟಿಕ್).  ಅನುವಂಶೀಯತೆ, ವಿಚರಣೆಗಳು, ಜೀವವಿಕಾಸ ಮುಂತಾದ ವಿಷಯಗಳನ್ನು ಅರಿಯಲು ಈ ಶಾಖೆ ಸಹಾಯ ಮಾಡುತ್ತದೆ. ಇದು ಜೀವವಿಜ್ಞಾನದ ಅತ್ಯಂತ ಆಧುನಿಕ ಶಾಖೆ.  ಜೀವರಸಾಯನ ಶಾಸ್ತ್ರ, ಬೆಳÀವಣಿಗೆ, ವಿಭೇದೀಕರಣ ಮುಂತಾದ ವಿಚಾರಗಳೂ ಈ ಶಾಖೆಯ ಪ್ರಕಾರದೊಳಗೆ ಬರುತ್ತವೆ.  ಅತ್ಯಂತ ಸೂಕ್ಷ್ಮ ಜೀವಿಗಳಾದ ವೈರಸ್‍ಗಳಿಂದ ಹಿಡಿದು ಮಾನವನ ವರೆಗಿನ ಜೀವಿಗಳಲ್ಲಿನ ಅನುವಂಶೀಯ ಗುಣಗಳು ಯಾವುವು ಮತ್ತು ಅನುವಂಶೀಯತೆಗೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದನ್ನು ತಳಿಶಾಸ್ತ್ರ ಚರ್ಚಿಸುತ್ತದೆ.  ಪಿತೃಗಳಿಂದ ಪೀಳಿಗೆಗೆ ಅನವಂಶೀಯ ಗುಣಗಳು ಹೇಗೆ ಸಾಗಿ ಬರುತ್ತವೆ ಎಂಬುದನ್ನು ತಿಳಿಸುವುದೇ ಅಲ್ಲದೆ ಅನುವಂಶೀಯತೆಗೆ ಮೂಲ ಘಟಕಗಳಾದ ಜೀನುಗಳು ಎಂದರೇನು?  ಇವುಗಳಲ್ಲಿರುವ ರಾಸಾಯನಿಕ ವಸ್ತುಗಳಾವುವು? ಎಂಬೆಲ್ಲ ವಿಚಾರಗಳನ್ನು ಈ ಶಾಖೆ ಸವಿಸ್ತಾರವಾಗಿ ಚರ್ಚಿಸುತ್ತದೆ.

	ತಳಿಶಾಸ್ತ್ರ ನಿಖರವಾಗಿ 1866ರಲ್ಲಿ ಆಸ್ಟ್ರಿಯದ ಪಾದ್ರಿ ಗ್ರೆಗೊರ್ ಮಂಡಲನ ಪ್ರಯೋಗಗಳಿಂದ ಮತ್ತು ಆತ ಪ್ರತಿಪಾದಿಸಿದ ಅನುವಂಶೀಯ ನಿಯಮಗಳಿಂದ ಪ್ರಾರಂಭವಾಯಿತೆನ್ನಬಹುದು.  ಆದರೆ ಈತನ ಪ್ರಯೋಗಗಳು 1900ರ ವರೆಗೂ ಬೆಳಕಿಗೆ ಬರಲಿಲ್ಲ.  ಆ ವರ್ಷ ಕಾರೆನ್ಸ್, ಡೆವ್ರೀಸ್ ಮತ್ತು ಷೆರ್ಮಾಕ್ ಎಂಬ ವಿಜ್ಞಾನಿಗಳು ಸ್ವತಂತ್ರವಾಗಿ ಏಕಕಾಲದಲ್ಲಿ ಮಂಡಲನ ತತ್ತ್ವಗಳನ್ನು ಆವಿಷ್ಕರಿಸಿದರು.  ಆದರೆ ತಳಿಶಾಸ್ತ್ರ ಕೇವಲ ಮೆಂಡಲಿನಿಂದ ಈಚೆಗೆ ಹುಟ್ಟಿಬಂದ ಶಾಖೆಯೇನಲ್ಲ.  ಏಕೆಂದರೆ ಆದಿಯಿಂದಲೂ ಅನುವಂಶೀಯತೆಯ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಇದ್ದವು ಎಂಬುದಕ್ಕೆ ಸಾಕ್ಷ್ಯಾಧಾರಗಳು ಇವೆ. ಇಂಥ ಭಾವನೆಗಳು ಮಾನವನ ಉಗಮದಿಂದಲೇ ಹುಟ್ಟಿಬಂದಿರಬೇಕು. ಕಿ.ಪೂ.4000ಕ್ಕೂ ಮುಂಚಿನ ಬ್ಯಾಬಿಲೋನಿಯನ್ನರ ಶಾಸನಗಳಲ್ಲಿ ಕುದುರೆಯ ಶಿರದ ಆಕಾರ ಮತ್ತು ಅದರ ಕುತ್ತಿಗೆಯ ಮೇಲಿನ ಅಲಿಯಾನ ಬೆಳವಣಿಗೆಯ ಬಗ್ಗೆ ಐದು ಪೀಳಿಗೆಯ ವರೆಗಿನ ವಂಶವೃಕ್ಷವಿರುವುದು ಕಂಡುಬಂದಿದೆ.  ಕ್ರಿಸ್ತಪೂರ್ವದ ಕಾಲದ ಕೆಲವು ಶಾಸನಗಳಲ್ಲಿ ಖರ್ಜೂರದ ಮರಗಳ ತಳಿಸಂಕರ ಕ್ರಿಯೆಯ ಬಗ್ಗೆ ನಿರೂಪಣೆ ಇದೆ.  ಅಂದಿನ ಜನರಿಗೆ ಲೈಂಗಿಕ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಅಡಗಿರುವ ಕೆಲವು ವಿಚಾರಗಳ ಬಗ್ಗೆ ಅರಿವಿತ್ತು ಎಂಬುದು ಈ ನಿರೂಪಣೆಗಳಿಂದ ಅರ್ಥವಾಗುತ್ತದೆ.  ಕ್ರಿಸ್ತಪೂರ್ವದ ಶತಮಾನಗಳಲ್ಲಿ ಚೀನೀಯರಿಗೆ ಸಂಕರ ತಳಿಗಳ ಹಾಗೂ ವಿಶಿಷ್ಟ ತಳಿಯ ಆಯ್ಕೆಯ ಬಗ್ಗೆ ಆಸಕ್ತಿಯಿತ್ತು.  ಈ ದಿಕ್ಕಿನಲ್ಲಿ ಅವರು ಯಶಸ್ವೀ ಪ್ರಯೋಗಗಳನ್ನು ನಡೆಸಿದ್ದರು ಎಂಬುದಕ್ಕೆ ದಾಖಲೆಗಳಿವೆ.  ನಮ್ಮ ಸಮಕಾಲಿನ ಬೆಳೆಗಳಾದ ಬತ್ತ, ರಾಗಿ, ಹತ್ತ ಮುಂತಾದವು ಈಗಿನ ರೂಪದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿರಲಿಲ್ಲ.  ಇವನ್ನು ನಮ್ಮ ಪೂರ್ವಜರು ಕಾಡುಗಿಡಗಳ ತಳಿಸಂಕರ ಕ್ರಿಯೆಯಿಂದ ಪಡೆದರು.  ಹೀಗೆ ವಿಕಾಸಗೊಂಡ ಈ ಸಂಕರತಳಿಗಳು ಕೇವಲ ಮಾನವನ ಆಶ್ರಯದಲ್ಲಿ ಬೆಳೆಯಬಲ್ಲವೇ ಹೊರತು ತಮಗೆ ತಾವೇ ಬದುಕಲಾರವು. ಈಗಿರುವ ಸಾಕುಪ್ರಾಣಿಗಳೆಲ್ಲವೂ ಪ್ರಕೃತಿಯಲ್ಲಿದ್ದ ವನ್ಯಜೀವಿಗಳ ಸಂಕರಕ್ರಿಯೆಯಿಂದಲೇ ಹುಟ್ಟಿ ಬಂದವು; ಕಾಡಿನಲ್ಲಿ ಈಗ ಬದುಕಲಾರವು. ಇವಕ್ಕೆ ಮಾನವನ ಆಶ್ರಯ ಬೇಕೇಬೇಕು.  ಇದೆಲ್ಲವನ್ನೂ ವಿಚಾರ ಮಾಡಿದಾಗ ತಳಿಶಾಸ್ತ್ರ ಮಾನವನ ಉಗಮದೊಂದಿಗೇ ಆರಂಭವಾದ ಜ್ಞಾನಶಾಖೆ ಎಂಬುದು ವೇದ್ಯವಾಗುತ್ತದೆ.

	ವೈಜ್ಞಾನಿಕವಾಗಿ ತಳಿಶಾಸ್ತ್ರ ಪ್ರಾರಂಭವಾದ ಬಗ್ಗೆ ನಿಖರವಾದ ದಾಖಲೆಗಳು ಇಲ್ಲದಿದ್ದಲ್ಲಿ ಪೈತಾಗರಸನ ಕಾಲದಿಂದಲೇ ಇದು ಬೆಳೆದು ಬಂದಿರುವುದನ್ನು ನಾವು ಕಾಣಬಹುದು. ತಳಿಶಾಸ್ತ್ರದ ಬಗ್ಗೆ ಇವನಿಗಿದ್ದ ಕೆಲವು ಭಾವನೆಗಳು ಅತ್ಯಂತ ಕುತೂಹಲಕಾರಿಗಳಾಗಿವೆ.  ಸಂಭೋಗ ಕ್ರಿಯೆಯ ಕಾಲದಲ್ಲಿ ಗಂಡಿನ ವಿವಿಧ ಅಂಗಗಳಿಂದ ತೇವಭರಿತವಾ ಒಂದು ರೀತಿಯ ಹಬೆ ಹುಟ್ಟಿಬರುತ್ತದೆ ಎಂದು ಈತನೂ ಈತನ ಸಮಕಾಲೀನ ಎಂಪೆಡಾಕ್ಲೀಸನೂ ನಂಬಿದ್ದರು.  ಈ ಹಬೆ ಹೆಣ್ಣಿನ ಗರ್ಭಕೋಶದೊಳಗೆ ಸೇರಿ ಬೆಳೆಯುವ ಭ್ರೂಣದಲ್ಲಿನ ವಿವಿಧ ಅಂಗಗಳನ್ನು ಉತ್ಪಾದಿಸುತ್ತದೆ ಎಂದು ಇವರು ತರ್ಕಿಸಿದರು.  ಪೈತಾಗರಸನ ಪ್ರಕಾರ ಬೆಳೆಯುವ ಭ್ರೂಣಕ್ಕೆ ಹೆಣ್ಣು ಯಾವ ಕೊಡುಗೆಯನ್ನು ನೀಡುವುದಿಲ್ಲ.  ಆದರೆ ಎಂಪೆಡಾಕ್ಲೀಸನ ಪ್ರಕಾರ ಹೆಣ್ಣು ಮತ್ತು ಗಂಡುಗಳೆರಡೂ ಭ್ರೂಣದ ಬೆಳವಣಿಗೆಯಲ್ಲಿ ಸಹಕರಿಸುತ್ತವೆ.

	ಇವರ ನಂತರದ ತತ್ವಜ್ಞಾನಿ ಅರಿಸ್ಟಾಟಲನಾದರೋ ಗಂಡಿನಿಂದ ಹುಟ್ಟಿ ಬರುವ ವೀರ್ಯ ಅತ್ಯಂತ ಶುದ್ಧವಾದ ರಕ್ತವೆಂದು ಹೇಳಿದ.  ಈ ಪರಿಶುದ್ಧ ರಕ್ತ ಹೆಣ್ಣಿನಲ್ಲಿ ಹೊಸ ಜೀವಿಯನ್ನು ಕೊಡುತ್ತದೆ ಎಂದು ಈತ ತೀರ್ಮಾನಿಸಿದ. ಈತನ ಪ್ರಕಾರ ಹೆಣ್ಣು ಬಹಿಷ್ಠೆಯಾದಾಗ ಹೊರಬರುವ ದ್ರವ ಅಶುದ್ಧ ವಸ್ತು. ಹೆಣ್ಣಿನ ಈ ಅಶುದ್ಧ ರಕ್ತದಿಂದ ಭ್ರೂಣ ತನ್ನ ಬೆಳವಣಿಗೆಗೆ ಬೇಕಾದ ವಸ್ತುಗಳನ್ನು ಆರಿಸಿಕೊಂಡು ಬೆಳೆಯುತ್ತದೆ ಎಂಬುದು ಈತನ ಅಭಿಪ್ರಾಯ.  ಅಂದರೆ ಈತನ ಪ್ರಕಾರ ಗಂಡಿನ ಜೀವ ಕೊಡುವ ವಸ್ತುವಿದೆಯಾದರೆ ಹೆಣ್ಣಿನಲ್ಲಿ ಆ ಜೀವದ ಬೆಳವಣಿಗೆಗೆ ಬೇಕಾದ ಎಲ್ಲ ವಸ್ತುಗಳೂ ಇವೆ. ಅರಿಸ್ಟಾಟಲನ ತತ್ತ್ವವನ್ನು ಆಧಾರರಹಿತ ಹಾಗೂ ನಿರುಪಯುಕ್ತ ಎಂದು ವೈಜ್ಞಾನಿಕವಾಗಿ ತೋರಿಸುವವರೆಗೆ ಚಾಲ್ತಿಯಲ್ಲಿತ್ತು.

	ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿ ಲ್ಯೂವೆನ್ ಹೂಕ್ ಎಂಬಾತ ಗಂಡಿನ ವೀರ್ಯದಲ್ಲಿರುವ ರೇತ್ರಾಣುಗಳನ್ನು ಸೂಕ್ಷ್ಮದರ್ಶಕದ ಸಹಾಯದಿಂದ ಗುರುತಿಸಿದ. ಪ್ರಪ್ರಥಮವಾಗಿ ಹೆಣ್ಣಿನ ಮೊಟ್ಟೆಯನ್ನು ಗುರುತಿಸಿದ ಕೀರ್ತಿಯೂ ಈತನಿಗೆ ಸಲ್ಲುತ್ತದೆ.  ರೇತ್ರಾಣು ಭ್ರೂಣಕ್ಕೆ ಜೀವ ಕೊಡುತ್ತದೆ.  ಮೊಟ್ಟೆ ಭ್ರೂಣದ ಬೆಳವಣಿಗೆಗೆ ಆಹಾರವನ್ನು ಒದಗಿಸುತ್ತದೆ ಎಂಬುದು ಈತನ ನಂಬಿಕೆ.  ತನ್ನ ನಂಬಿಕೆ ನಿಜವೆಂದು ತೋರಿಸಲು ಕೆಲವು ಪ್ರಯೋಗಗಳನ್ನೂ ಈತ ನಡೆಸಿದ.  ಕಂದು ಬಣ್ಣದ ಗಂಡು ಮೊಲವನ್ನು ಬಿಳಿಯ ಬಣ್ಣದ ಹೆಣ್ಣು ಮೊಲದೊಡನೆ ಸಂಕರ ಕ್ರಿಯೆಗೊಳಪಡಿಸಿ ಪ್ರಥಮ ಪೀಳಿಗೆಯಲ್ಲಿ ಎಲ್ಲ ಮರಿಗಳೂ ಕಂದು  ಬಣ್ಣವನ್ನೇ ಪಡೆಯುವುದನ್ನು ತೋರಿಸಿದ.  ಆದ್ದರಿಂದ ಹುಟ್ಟುವ ಪೀಳಿಗೆಯಲ್ಲಿ ಗಂಡಿನ ಗುಣವೇ ಪ್ರಧಾನವೆಂದೂ ಹೆಣ್ಣು ಕೇವಲ ಗಂಡಿನ ಗುಣಗಳ ಬೆಳವಣಿಗೆಗೆ ಪೂರಕವಾದ ಆಹಾರ ವಸ್ತುಗಳನ್ನು ನೀಡುತ್ತದೆ ಎಂದೂ ಈತ ತೀರ್ಮಾನಿಸಿದ.

	ಈತನ ತರುವಾಯ ಸ್ವಾಮರ್‍ಡ್ಯಾಮ್ ಎಂಬ ವಿಜ್ಞಾನಿ ಪೂರ್ವೋದ್ಭವ ಸಿದ್ಧಾಂತವನ್ನು ಪ್ರತಿಪಾದಿಸಿದ. ಇದರ ಪ್ರಕಾರ ಮುಂದೆ ಬೆಳೆದು ರೂಪುಗೊಳ್ಳುವ ಜೀವಿ ಗಂಡಿನ ರೇತ್ರಾಣುವಿನಲ್ಲಿ ಮತ್ತು ಹೆಣ್ಣಿನ ಅಂಡದಲ್ಲಿ ಪೂರ್ವಭಾವಿಯಾಗಿ ರೂಪಗೊಂಡಿರುತ್ತದೆ.  ಹೀಗೆ ಅಡಗಿರುವ ಈ ಜೀವಿ ಮುಂದೆ ದೊಡ್ಡದಾಗಿ ಬೆಳೆದು ಹೊರಬರುತ್ತದೆ.  ಈ ಸಿದ್ಧಾಂತ ಕೇವಲ ಕಾಲ್ಪನಿಕವಾಗಿದ್ದರೂ ದೈವ ಸೃಷ್ಟಿ ಮತ್ತು ಮಾಟ ಮುಂತಾದ ನಂಬಿಕೆಗಳನ್ನು ತಳ್ಳಿಹಾಕಿ ವಾಸ್ತವ ದೃಷ್ಟಿಯನ್ನು ಬೆಳೆಸಿಕೊಳ್ಳಲು ಕೆಲಮಟ್ಟಿಗೆ ಸಹಾಯ ಮಾಡಿತು.

	18ನೆಯ ಶತಮಾನದಲ್ಲಿ ಜೀವಿಸಿದ್ದ ಮಪಾರ್ಟಿಯಸ್ ಎಂಬ ವಿಜ್ಞಾನಿ ಪೂರ್ವೋದ್ಭವ ಸಿದ್ಧಾಂತವನ್ನು ಒಪ್ಪದೆ ಅದಕ್ಕೆ ಬದಲಾಗಿ ದ್ವಿಪಿತೃ ಅನುವಂಶೀಯತೆಯ ತತ್ತ್ವವನ್ನು ಪ್ರತಿಪಾದಿಸಿದ.  ಈತನ ಪ್ರಕಾರ ಗಂಡು ಮತ್ತು ಹೆಣ್ಣುಗಳೆರಡೂ ಭವಿಷ್ಯ ಜೀವಿಯ ರೂಪುಗೊಳ್ಳುವಿಕೆಗೆ ಸಹಾಯ ಮಾಡುತ್ತವೆ.  ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ ವೀರ್ಯವನ್ನು ಉತ್ಪಾದಿಸುತ್ತವೆ.  ಈ ವೀರ್ಯದಲ್ಲಿ ಅತಿ ಸೂಕ್ಷ್ಮವಾದ ಕಣಗಳು ಅಡಗಿರುತ್ತವೆ.  ಈ ಎರಡು ಕಣಗಳು ಒಂದರೊಡನೊಂದು ಕೂಡುವುದರಿಂದ ಭವಿಷ್ಯ ಜೀವಿಯ ನಿರ್ದಿಷ್ಟ ಅಂಗಗಳು ರೂಪುಗೊಳ್ಳುವುವು.  ಗಂಡಿನಿಂದ ಬಂದ ಕಣಗಳು ಪ್ರಬಲ ಗುಣಗಳನ್ನು ಪಡೆದಿದ್ದರೆ ಆ ಜೀವಿ ತಂದೆಯನ್ನೇ ಹೆಚ್ಚು ಹೋಲುತ್ತದೆ. ಹಾಗಲ್ಲದೆ ತಾಯಿಯಿಂದ ಬಂದ ಕಣಗಳು ಪ್ರಬಲ ಗುಣಗಳನ್ನು ಪಡೆದಿದ್ದರೆ ಆ ಜೀವಿ ತಾಯಿಯನ್ನೇ ಹೆಚ್ಚು ಹೋಲುತ್ತದೆ. ಅಲ್ಲದೆ ಪಿತೃಗಳಲ್ಲಿ ಈ ರೀತಿಯ ಕಣಗಳು ಅವರ ಎಲ್ಲ ಅಂಗಗಳಲ್ಲಿಯೂ ಉತ್ಪತ್ತಿಯಾಗಿ ಕೊನೆಗೆ ಅವೆಲ್ಲವೂ ಸಂತಾನಾಂಗದೊಳಕ್ಕೆ ಹರಿದು ಬಂದು ಅಲ್ಲಿಂದ ಸಂಭೋಗ ಕ್ರಿಯೆಯ ಕಾಲದಲ್ಲಿ ಜೊತೆಗೂಡಿ ಮುಂದಿನ ಜೀವಿಯನ್ನು ಕೊಡುತ್ತವೆ ಎಂಬುದು ಮಷಾರ್ಟಿಯಸನ ಅಭಿಪ್ರಾಯ.

	ಇದೇ ತತ್ತ್ವವನ್ನು ಮುಂದೆ ಚಾಲ್ರ್ಸ್ ಡಾರ್ವಿನ್ ಅನುವಂಶೀಯ ಕ್ರಿಯೆ ಹೇಗೆ ಆಗುತ್ತದೆ ಎಂಬುದನ್ನು ತಿಳಿಸಲು ಬಳಸಿಕೊಂಡ.  ಈತನ ಪ್ಯಾನ್‍ಜೀನುಗಳ ತತ್ತ್ವ ಮಷಾರ್ಟಿಯಸನ ತತ್ತ್ವದ ಪ್ರತಿರೂಪ.  ಡಾರ್ವಿನ್ ಇಷ್ಟಕ್ಕೇ ತನ್ನ ಪ್ರತಿಪಾದನೆಗಳನ್ನು ನಿಲ್ಲಿಸದೆ ವಂಶವೃಕ್ಷಗಳನ್ನು ಸಂಗ್ರಹಿಸಿ ಅವುಗಳ ಅನುವಂಶೀಯತೆಯನ್ನು ವಿವರಿಸಿದುದು ಅನುವಂಶೀಯತೆಯ ಬಗ್ಗೆ ಆತನಗಿದ್ದ ಆಸಕ್ತಿಯನ್ನು ತೋರಿಸುತ್ತದೆ.  ಕೆಲವು ಸಂಸಾರಗಳಲ್ಲಿ ಸಾಮಾನ್ಯ ಸಂಖ್ಯೆಗಿಂತ ಹೆಚ್ಚಿನ  ಸಂಖ್ಯೆಯ ಬೆರಳುಗಳಿರುವುದನ್ನು ಗುರುತಿಸಿದ  ಈತ ಬಹು ಬೆರಳಿನ ಅನುವಂಶೀಯೆಯ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಿ ಆ ಮನೆತನದ ವಂಶವೃಕ್ಷಗಳನ್ನು ಮೊದಲ ಬಾರಿಗೆ ಕರಾರುವಕ್ಕಾಗಿ ವಿವರಿಸಿದ.  ಜೊತೆಗೆ ತಳಿಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಸಂಕರ ಪ್ರಯೋಗಗಳನ್ನೂ ಈಗ ನಡೆಸಿದ್ದ.

	ಬಾನೆಟ್ ಎಂಬ ಇನ್ನೊಬ್ಬ ವಿಜ್ಞಾನಿ ಡಾರ್ವಿನ್ನನ ತತ್ತ್ವಗಳಿಗೆ ವಿರುದ್ಧವಾದ ಭಾವನೆಗಳನ್ನು ಹೊಂದಿದೆ.  ಈತನ ಪ್ರಕಾರ ಭವಿಷ್ಯದಲ್ಲಿ ಹುಟ್ಟುವ ಎಲ್ಲ ಜೀವಿಗಳ ಅತಿ ಸೂಕ್ಷ್ಮ ಅಚ್ಚುಗಳು ಹೆಣ್ಣಿನ ಶರೀರದಲ್ಲಿ ಇರುತ್ತವೆ.  ಇವು ಚೀನೀಯರ ಪೆಟ್ಟಿಗೆಗಳಂತೆ ಹೆಣ್ಣಿನ ಅಂಡದಲ್ಲಿ ಒಂದರೊಳಗೊಂದು ಅಡಗಿದ್ದು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಿದು ಬರುತ್ತವೆ.  ಇದು ಕೂಡ ಒಂದು ರೀತಿಯ ಪೂರ್ವೋದ್ಭವ ಸಿದ್ಧಾಂತವೇ. 

	18 ನೆಯ ಶತಮಾನದ ಉತ್ತರಾರ್ಧದಲ್ಲಿ ವುಲ್ಪ್ ಎಂಬ ಜರ್ಮನ್ ವಿಜ್ಞಾನಿ ಪೂರ್ವೋದ್ಭವ ಸಿದ್ಧಾಂತವನ್ನು ಅಲ್ಲಗಳೆದ.  ಕೋಳಿಯ ಮೊಟ್ಟೆಯಲ್ಲಿ ಮರಿ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಈತ ಅಭ್ಯಾಸ ಮಾಡಿದ. ಈ ಅಭ್ಯಾಸದ ಫಲವಾಗಿ ಭವಿಷ್ಯ ಜೀವಿಯ ಬೆಳೆವಣಿಗೆ,  ವಿಭೇದೀಕರಣಕೊಳ್ಳಗಾಗದಿರುವ ನಿಷೇಚಿತ ಮೊಟ್ಟೆಯಿಂದ ಭವಿಷ್ಯ ಜೀವಿ ತರ್ಕಬದ್ಧವಾದ ರೀತಿಯಲ್ಲಿ ಅನುಕ್ರಮವಾಗಿ ವಿಭೇದೀಕರಣ ಕ್ರಿಯೆಗೊಳಗಾಗಿ ಬೆಳೆದುಬರುತ್ತದೆ ಎಂದೂ, ಮೊಟ್ಟೆಯಲ್ಲಾಗುವ ಕೋಶ ವಿಭಜನೆಯಿಂದ ಈ ಬೆಳೆವಣಿಗೆ ಆಗುತ್ತದೆ ಎಂದೂ ಪ್ರಾಯೋಗಿಕವಾಗಿ ಈತ ತೋರಿಸಿದ, ಈ ತತ್ತ್ವಕ್ಕೆ ಎಪಿಜೆನಿಸಿಸ್ ತತ್ತ್ವವೆಂದು ಹೆಸರು. ಇದು ಇಂದಿಗೂ ಮಾನ್ಯವಾಗಿರುವ ತತ್ತ್ವ.. 

	ವಿಜ್ಞಾನ ಬೆಳೆದಂತೆ, ವೈಜ್ಞಾನಿಕ ಮನೋಭಾವಗಳು ಬೆಳೆದಂತೆ, ಅನುವಂಶೀಯತೆಯ ಬಗ್ಗೆ ಮಾನವ ಕುತೂಹಲವೂ ಬೆಳೆಯಿತು.  ಅನುವಂಶೀಯತೆಗೆ ಕಾರಣಗಳು ಯಾವುವು? ವಿಚರಣೆಗಳು ಹೇಗೆ ಉದ್ಭವಿಸುತ್ತವೆ? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಂಡವು. ಈ ಪ್ರಶ್ನೆಗಳಿಗೆ ಉತ್ತರ ಹುಡುದಲಯ ಲುಮಾರ್ಕ್ ಎಂಬ ವಿಜ್ಞಾನಿ (1744-1829) ಪ್ರಯತ್ನಿಸಿದ,  ಅಂಗಗಳ ಉಪಯೋಗ ಮತ್ತು ಅನುಪಯೋಗ ಸಿದ್ಧಾಂತ ಹಾಗೂ ಅರ್ಜಿತ ಗುಣಗಳ ಅನುವಂಶೀಯತೆಯ ತತ್ತ್ವವನ್ನು ಈತ ಪ್ರತಿಪಾಸಿದ.  ಈತನ ಪ್ರಕಾರ ಜೀವಿಗಳಿಗೆ ನಾನಾ ಅವಶ್ಯಕತೆಗಳು ಹಾಗೂ ಆಕಾಂಕ್ಷೆಗಳು ಇರುತ್ತವೆ.  ಇದಕ್ಕೆ ಹೊಣೆ ಪರಿಸರ.  ಜೀವಿಯ ಆ ಆಕಾಂಕ್ಷೆಗಳ ಅದರ ಅಂಗಗಳ ಉಪಯೋಗವನ್ನು ಹಾಗೂ ನಿರುಪಯೋಗವನ್ನು ತೀರ್ಮಾನಿಸುತ್ತದೆ,  ಈ ತೀಮಾನದಿಂದ ಅದು ತನ್ನ ಅಂಗಗಳಲ್ಲಿ ಮಾರ್ಪಾಟುಗಳನ್ನು ಮಾಡಿಕೊಳ್ಳುತ್ತದೆ.  ಹೀಗೆ ಒಂದು ಪೀಳಿಗೆಯಲ್ಲಿ ಮಾರ್ಪಾಟಾದ ಅಂಗಗಳು ಮುಂದಿನ ಪೀಳಿಗೆಗೆ ಸಾಗಿ ಬರುತ್ತವೆ ಎಂದು ಈತ ಪ್ರತಿಪಾದಿಸಿದ. ಅನುವಂಶೀಯತೆಯನ್ನು ಮತ್ತೊಂದು ರೀತಿಯಲ್ಲಿ ಡಾರ್ವಿನ್ ಪ್ರತಿಪಾದಿಸಿದ.  ಆತ ಪ್ರತಿಪಾದಿಸಿದ ಪ್ಯಾನ್ ಜೀನುಗಳ ತತ್ತ್ವವನ್ನು ಹಿಂದೆ ಹೇಳಿದೆ.  ಈ ತತ್ತ್ವದ ಪ್ರಕಾರ ಶರೀರದ ಎಲ್ಲ ಅಂಗಗಳೂ ಸೂಕ್ಷ್ಮವಾದ ಪ್ಯಾನ್‍ಜೀನ್‍ಗಳನ್ನು ಉತ್ಪಾದಿಸಿ ಸಂತಾನಾಂಗಗಳಿಗೆ ಕಳುಹಿಸುತ್ತವೆ.  ಅನಂತರ ಪ್ಯಾನ್ ಜೀನ್‍ಗÀಳು ಗಂಡಿನ ರೇತ್ರಾಣು, ಹಾಗೂ ಹೆಣ್ಣಿನ ಅಂಡದ ಮೂಲಕ ಹೊರಬಿದ್ದು ಒಂದುಗೂಡಿ ಮುಂದೆ ಹುಟ್ಟುವ ಜೀವಿಗಳಲ್ಲಿ ಪ್ರಕಾಶಕ್ಕೆ ಬರುತ್ತವೆ.  ಹೀಗೆ ದ್ವಿಪಿತೃ ಸಂತಾನದಿಂದ ಹುಟ್ಟಿಬರುವ ಜೀವಿಗಳಲ್ಲಿ ಈ ಎರಡೂ ಪಿತೃಜೀವಿಗಳ ಗುಣಲಕ್ಷಣಗಳು ಬೆರೆತಿರುವುದನ್ನು ಕಾಣಬಹುದು ಎಂದು ಡಾರ್ವಿನ್ ಪ್ರತಿಪಾದಿಸುತ್ತಾನೆ. 

	19 ನೆಯ ಶತಮಾನದ ಕೊನೆಯ ಭಾಗದಲ್ಲಿ ವೈಸ್‍ಮನ್ ಡಾರ್ವಿನ್ ಪ್ರತಿಪಾದಿಸಿದ ತತ್ತ್ವದ ಸತ್ಯತೆಯನ್ನು ಪ್ರಶ್ನಿಸಿದ. ಜೀವಿಗಳಲ್ಲಿ ಪ್ಯಾನ್‍ಜೀನ್ ಇಲ್ಲವೆಂದೂ ಅದಕ್ಕೆ ಬದಲಾಗಿ ಪ್ರಜನನರಸ ಮುಖ್ಯವೆಂದೂ ಇದೇ ಅನುವಂಶೀಯೆತೆಗೆ ಕಾರಣವೆಂದೂ ತರ್ಕಿಸಿದ.  ಈತ ಪ್ರಜನನರಸ ಸಿದ್ಧಾಂತವನ್ನು (ತಿಯೊರಿ ಆಫ್ ಜರ್ಮ್‍ಪ್ಲಾಸಮ್) ಪ್ರತಿಪಾದಿಸಿ.  ಈ ತತ್ತ್ವದ ಪ್ರಕಾರ ಎಲ್ಲ ಬಹುಕೋಶ ಜೀವಿಗಳಲ್ಲೂ ಪ್ರಜನನರಸ ಪ್ರತ್ಯೇಕವಾಗಿ ವಿಶಿಷ್ಟ ಅಂಗದಲ್ಲಿರುತ್ತದೆ. ಈ ಪ್ರಜನನರಸ ಕೋಶವಿಭಜನೆಗಳಿಂದÀ ಬದಲಾಗದಂತೆ ಉಳಿದುಕೊಂಡಿರುವ ರೀತಿಯಲ್ಲಿ ಆ ಜೀವಿಯ ದೇಹ ಕಾಪಾಡಿಕೊಂಡು ಬರುತ್ತದೆ.  ಗಂಡು ಮತ್ತು ಹೆಣ್ಣಿನ ಪ್ರಜನನರಸದ ಮಿಲನದಿಂದ ಬರುವ ಜೀವವೇ ಪ್ರಜನನರಸದಿಂದ ಹುಟ್ಟಿ ಬರುವ ಕೂಸು.  ಈ ರಸಕ್ಕೆ ಜೀವಿಯ ವಿವಿಧ ಅಂಗಗಳನ್ನು ಕೊಡುವ ಶಕ್ತಿಯಿದೆ.  ಅಲ್ಲದೆ ಈ ರಸ ಪರಿಸರದ ಪ್ರಭಾವಕ್ಕೆ ಒಳಗಾಗುವುದಿಲ್ಲ. 

	ವೈಸ್‍ಮನ್ ಅನಂತರ ಬಂದ ಡೆವ್ರೀಸ್ ಎಂಬ ವಿಜ್ಞಾನಿ 1900ರಲ್ಲಿ ವಿಕೃತಿ ಸಿದ್ಧಾಂತವನ್ನು (ಮ್ಯುಟೇಷನ್ ತಿಯೊರಿ) ಪ್ರತಿಪಾದಿಸಿದ. ಈತನ ಪ್ರಕಾರ ಜೀವಿಗಳಲ್ಲಿ ಇದ್ದಕಿದ್ದಂತೆಯೇ ಯಾವುದಾದರೊಂದು ಹಳೆಯ ಗುಣಕ್ಕೆ ಬದಲಾಗಿ ಹೊಸ ಗುಣ ಹುಟ್ಟಿಕೊಳ್ಳುತ್ತದೆ. ಎಂಥ ಬದಲಾವಣೆÉಯನ್ನು ಈತ ವಿಕೃತಿ (ಮ್ಯುಟೇಷನ್) ಎಂದು ಕರೆದ. ವಿಕೃತಿ ಅನುವಂಶೀಯವಾಗಿ ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತದೆ.  ಇದರಿಂದಾಗಿ ಜೀವಿಗಳಲ್ಲಿ ಹಿಂದೆ ಇರದಿದ್ದ ಹೊಸÀ ಗುಣಗಳು ಹುಟ್ಟಿಕೊಂಡು ವಿಕಾಸದಲ್ಲಿ ಅತಿಮುಖ್ಯ ಪಾತ್ರ ವಹಿಸುವುವು ಎಂಬುದೇ ಈತನ ವಾದದ ತಿರುಳು.  ಈ ತತ್ತ್ವಕ್ಕೆ ಈಗ ಮಾನ್ಯತೆ ಇಲ್ಲವಾದರೂ ಜೀವ ವಿಕಾಸದ ಬಗ್ಗೆ ಹೆಚ್ಚು ತಿಳಿಯಲು ಇದರಿಂದ ಅವಕಾಶವಾಯಿತು. 

	ಗ್ರೆಗೊರ್ ಮಂಡಲ್ ಆಧುನಿಕ ತಳಿಶಾಸ್ತ್ರದ ಜನಕ.  ಈ ಶಾಸ್ತ್ರ ಒಂದು ನಿರ್ದಿಷ್ಟ ಜ್ಞಾನವಾಗಿ ಬೆಳೆಯಲು ಈತನ ಕೊಡುಗೆಗಳು ಸಹಾಯ ಮಾಡಿದವು. ಮಾತಾಪಿತೃಗಳಿಂದ ಬರುವ ಗುಣಗಳು. ಲಕ್ಷಣಗಳು ಒಂದರೊಡನೊಂದು ಬೆರೆತುಹೋಗುತ್ತವೆ ಎಂಬ ಹಳೆಯ ತತ್ತ್ವವನ್ನು ಸಂಪೂರ್ಣವಾಗಿ ತೊಡೆದುಹಾಕಿ ಅದಕ್ಕೆ ಬದಲಾಗಿ ಘಟಕ ಅನುವಂಶೀಯ ತತ್ತ್ವವನ್ನು ತನ್ನ ಪ್ರಯೋಗಗಳ ಮೂಲಕ ಈತ ಶ್ರುತಪಡಿಸಿದ.  ಈತ ತನ್ನ ಪ್ರಯೋಗಗಳಿಗೆ ಆರಿಸಿಕೊಂಡ ಜೀವಿ ಬಟಾಣಿ ಗಿಡ.  ಇದರ ಒಂದೊಂದೇ ಗುಣವನ್ನು ಆರಿಸಿಕೊಂಡು ಆ ಗುಣದ ಅನುವಂಶೀಯತೆಯ ರೀತಿ ನಿಯಮಗಳನ್ನು ನಿರ್ದಿಷ್ಟವಾಗಿ ಅಭ್ಯಾಸ ಮಾಡಿ ತನ್ನ ತತ್ತ್ವಗಳನ್ನು ಈತ ಪ್ರತಿಪಾದಿಸಿದ, ತನ್ನ ಪ್ರಯೋಗಗಳಲ್ಲಿ ಉಪಯೋಗಿಸಿದ ಬಟಾಣಿ ಗಿಡಗಳ ಹೂವಿನ ಬಣ್ಣ.  ಹೂವು ಗಿಡದ ಯಾವ ಭಾಗದಲ್ಲಿದೆ? ರೆಂಬೆಯ ತುದಿಯಲ್ಲಿದೆಯೆ? ಎಲೆಗಳ ಕಂಕುಳಲ್ಲಿದೆಯೆ, ಬೀಜಗಳ ಆಕಾರ, ಬಣ್ಣ, ಇತ್ಯಾದಿ ಏಳು ಪ್ರತ್ಯೇಕ ಗುಣಗಳನ್ನು ಆಯ್ದುಕೊಂಡು ಅವುಗಳ ಅನುವಂಶೀಯತೆಯ ಬಗ್ಗೆ ಶಾಸ್ತ್ರೀಯವಾಗಿ ಮೆಂಡಲ್ ಅಭ್ಯಾಸ ಮಾಡಿದ.  ಬಟಾಣಿ ಗಿಡಗಳು ಶುದ್ಧ ತಳಿಗಳು.  ಸ್ವಕೀಯ ಪರಾಗಸ್ಪರ್ಶ ಇವುಗಳ ಒಂದು ಗುಣ.  ಹೀಗಾಗಿ ಈ ಗಿಡ ಈತನ ಪ್ರಯೋಗಕ್ಕೆ ಬಹಳ ಉಪಯುಕ್ತವಾಯಿತು.  ವಿರುದ್ಧ ಗುಣಗಳುಳ್ಳ ಒಂದು ಜೊತೆ ಶುದ್ಧ ತಳಿಗಳನ್ನು ಈತ ತನ್ನ ಪ್ರಥಮ ಪ್ರಯೋಗಕ್ಕೆ ಆರಿಸಿಕೊಂಡ.  ಉದಾಹರಣೆÉಗೆ ಕೆಂಪು ಬಣ್ಣದ ಹೂವಿನ ಗಿಡವನ್ನು ಬಿಳಿಯ ಬಣ್ಣದ ಹೂವಿನ ಗಿಡದೊಂದಿಗೆ ಅಡ್ಡ ಹಾಯಿಸಿದ.  ಈ ಗಿಡಗಳನ್ನು ಪಿತೃ ಪೀಳಿಗೆ ಎಂದೂ ಈ ಪೀಳಿಗೆಯಿಂದ ಹುಟ್ಟಿಬಂದ ಪೀಳಿಗೆಯನ್ನು ಪ್ರಥಮ ಪೀಳಿಗೆ ಅಥವಾ ಈ1 ಪೀಳಿಗೆ ಎಂದೂ ಹೆಸರಿಸಿದ.  ಈ ಪೀಳಿಗೆಯಲ್ಲಿ ಕೆಂಪು ಹೂ ಬಿಡುವ ಸಸ್ಯಗಳು ಮಾತ್ರ ಹುಟ್ಟಿದವು.  ಇದೆರಿಂದಾಗಿ ಕೆಂಪು ಬಣ್ಣ ಪ್ರಬಲ ಗುಣವೆಂದೂ ಬಿಳಿಯ ಬಣ್ಣ ಅಪ್ರಬಲ ಗುಣವೆಂದೂ ಈತ ತೀರ್ಮಾನಿಸಿ, ಪ್ರಥಮ ಪೀಳಿಗೆಯಲ್ಲಿ ಪ್ರಬಲ ಗುಣ ಮಾತ್ರ ವ್ಯಕ್ತಗೊಳ್ಳುತ್ತದೆಂದೂ ಅಪ್ರಬಲ ಗುಣ ಆ ಗಿಡಗಳಲ್ಲಿದ್ದರೂ ವ್ಯಕ್ತಗೊಳ್ಳುವುದಿಲ್ಲವೆಂದೂ ತಿಳಿಸಿದ.  ಪ್ರಥಮ ಪೀಳಿಗೆ ಪಿತೃಪೀಳಿಗೆಯಂತೆ ಶುದ್ಧ ತಳಿಗಳಲ್ಲ. ಇವು ಸಂಕರಗಳು.  ಅನಂತರ ಪ್ರಥಮ ಪೀಳಿಗೆ ಜೀವಿಗಳನ್ನು ಒಂದರೊಡನೊಂದು ಅಡ್ಡಹಾಯಿಸಿ ದ್ವಿತೀಯ ಪೀಳೆಗೆಯನ್ನೂ ಪಡೆದ.  ದ್ವಿತೀಯ ಪೀಳಿಗೆಗ ಈತ ಈ2  ಪೀಳಿಗೆ ಎಂದು ಹೆಸರಿಟ್ಟ.  ಈ ಪೀಳಿಗೆಯಲ್ಲಿ ಕೆಂಪು ಮತ್ತು ಬಿಳಿ ಬಣ್ಣ ಕೊಡುವ ಎರಡೂ ಬಗೆಯ ಗಿಡಗಳು ಒಂದು ನಿರ್ದಿಷ್ಟಪ್ರಮಾಣದಲ್ಲಿ ಅಂದರೆ 3 : 1 ರ ಅನುಪಾತದಲ್ಲಿ ಹುಟ್ಟಿಕೊಂಡವು.

	ಅನಂತರ ಮೆಂಡಲ್ ಎರಡು ಗುಣಗಳನ್ನು ತೆಗೆದುಕೊಂಡು ತನ್ನ ಮುಂದಿನ ಪ್ರಯೋಗಗಳನ್ನು ನಡೆಸಿದ.  ಈ ಪ್ರಯೋಗಗಳಲ್ಲಿ ಈತ 9 :3 : 3 : 1 ರ ಅನುಪಾತದಲ್ಲಿ ಈ ಗುಣಗಳ ವಿಂಗಡಣೆಯನ್ನು ಕಂಡ.  ಇಲ್ಲಿ ಮೆಂಡಲನ ಪ್ರಯೋಗಗಳ ನಿಖರತೆ, ಗುಣಗಳನ್ನು ಆರಿಸಿಕೊಂಡ ವಿಧಾನ.  ಇವುಗಳ ಅನುವಂಶೀಯತೆಯ ರೀತಿ - ಇವು ಅತಿ ಮುಖ್ಯ.  ಈತನ ತತ್ತ್ವಗಳು ಇಂದಿಗೂ ಸರ್ವಮಾನ್ಯ. ಮೆಂಡಲನ ಮೊದಲ ತತ್ತ್ವಕ್ಕೆ ಪ್ರತ್ಯೇಕತೆಯ ನಿಯಮ (ಲಾ ಆಫ್ ಸೆಗ್ರಿಗೇಷನ್) ಎಂದೂ ಎರಡನೆಯ ತತ್ತ್ವಕ್ಕೆ ಸ್ವತಂತ್ರ ವಿಂಗಡಣೆಯ ನಿಯಮ (ಲಾ ಆಫ್ ಇಂಡಿಪೆಂಡೆಂಟ್ ಅಸಾರ್ಟ್‍ಮೆಂಟ್) ಎಂದೂ ಹೆಸರು.  

	ಮೆಂಡಲನ ಅನುವಂಶೀಯ ನಿಯಮಗಳನ್ನು ಆಧಾರವಾಗಿಟ್ಟುಕೊಂಡು ಬ್ಯಾಕ್ಟೀರಿಯ, ಶಿಲೀಂಧ್ರಗಳು, ಡ್ರೊಸಾಫಿಲ, ಇಲಿ, ಕುರಿ, ಹಸು ಹಾಗೂ ಇನ್ನಿತರ ಜೀವಿಗಳ ಮೇಲೆ ಪ್ರಯೋಗಗಳನ್ನು ವಿಜ್ಞಾನಿಗಳು ನಡೆಸಿದ್ದಾರೆ. ಮೆಂಡಲನ ತತ್ತ್ವಗಳನ್ನು ವಿಶ್ವಮಾನ್ಯವೆಂದು ಈ ಪ್ರಯೋಗಗಳಿಂದ ಸ್ಥಿರೀಕರಿಸಲಾಗಿದೆ. 

	ಹೀಗೆ ಅನುವಂಶೀಯತೆಯ ವಿಧಾನಗಳು ಅರ್ಥವಾದಂತೆ ಜೀವಕೋಶ ವಿಜ್ಞಾನವೂ ಜೊತೆಯಲ್ಲಿಯೇ ಬೆಳೆದುಬಂತು.  ಜೀವಕೋಶ, ಅದರ ವಿಭಜನೆ ಹಾಗೂ ವಿಭಜನೆಯ ಹಂತಗಳು, ದೈಹಿಕ ಕೋಶಗಳಲ್ಲಿ ಕ್ರೋಮೋಸೋಮುಗಳ ನಡೆವಳಿಕೆ, ಗ್ಯಾಮೀಟುಗಳು ಉತ್ಪಾದನೆ, ನಿಷೇಚನಕ್ರಿಯೆ ಮುಂತಾದ ವಿವಿಧ ರೀತಿಯ ಕ್ರಿಯೆಗಳನ್ನು ಕೋಶವಿಜ್ಞಾನಿಗಳು ಅರ್ಥಮಾಡಿಕೊಂಡರು.  ಈ ಎಲ್ಲ ಸಂಶೋಧನೆಗಳಿಂದÀ ಕ್ರೋಮೋಸೋಮುಗಳು ಅನುವಂಶೀಯ ವಸ್ತುವನ್ನು ಹೊತ್ತು ಸಾಗುವ ವಸ್ತುಗಳ ಎಂದು ಗೋಚರವಾಯಿತಲ್ಲದೆ ಅನುವಂಶೀಯ ಘಟಕಗಳಾದ ನೂರಾರು ಜೀನುಗಳು ಕ್ರೋಮೋಸೋಮುಗಳಲ್ಲಿ ಸ್ಥಿತವಾಗಿವೆ ಎಂಬುದು ತಿಳಿದುಬಂತು. ಜೀವಕೋಶÀ ವಿಜ್ಞಾನ ಬೆಳೆದಂತೆ ಕ್ರೋಮೋಸೋಮುಗಳಲ್ಲಿ ಲಿಂಗಕ್ರೋಮೋಸೋಮುಗಳು ಮತ್ತು ಅಟೊಸೋಮುಗಳು ಎಂಬ ಎರಡು ಬಗೆಯವು ಇವೆ ಎಂಬುದೂ ಲಿಂಗಕ್ರೋಮೋಸೋಮುಗಳು ಅಟೊಸೋಮುಗಳಿಗಿಂತ ಭಿನ್ನರೀತಿಯಲ್ಲಿ ವರ್ತಿಸುತ್ತವೆ ಎಂಬುದೂ ಬೆಳಕಿಗೆ ಬಂತು. ಅಲ್ಲದೆ ಒಂದೇ ಜೀನು ನಾನಾ ರೂಪದಲ್ಲಿ ಇರಬಲ್ಲುದು ಎಂಬುದು ವೇದ್ಯವಾಯಿತು.  ಇದರಿಂದಾಗಿ ಬಹುಗುಣಗಳುಳ್ಳ ಜೀನುಗಳ ಅಲೀಲ್ ಶ್ರೇಣಿ ಇದೆ ಎಂಬುದು ಅರ್ಥವಾಯಿತು ಎಲ್ಲದಕ್ಕಿಂತ ಹೆಚ್ಚಾಗಿ ಕೆಲವು ಬಾರಿ ಒಂದು ಗುಣವನ್ನು ಅನೇಕ ಜೀನುಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿರಬಹುದು ಎಂಬುದು ಶ್ರುತಪಟ್ಟಿತು. 

	ಜೀನುಗಳ ಸಂಲಗ್ನತೆ, ಜೀನುಗಳ ಅದಲುಬದಲು ಕ್ರಿಯೆಯ ಅಭ್ಯಾಸದಿಂದ ಜೀನುಗಳ ಸಂಲಗ್ನತೆಯ ಪಟಗಳನ್ನು ತಯಾರಿಸಲಾಯಿತು. ಜೀನುಗಳ ವಿಕೃತ, ವಿಕೃತಕಾರಕ ಹಾಗೂ ಪ್ರೇರಕ ರಾಸಾಯನಿಕಗಳು, ಆಯಾನುಕಾರಕ ವಿಕಿರಣಗಳು ಮುಂತಾದವು ಜೀನುಗಳ ಕಾರ್ಯಶೀಲತೆಯ ಮೇಲೆ ಬೆಳಕು ಚೆಲ್ಲಿವೆ.  ಈ ಎಲ್ಲ ವಿಚಾರಗಳಿಂದಾಗಿ ಅನುವಂಶೀಯತೆಯ ವಿಧಾನವನ್ನು ಬಹಳ ಮಟ್ಟಿಗೆ ಅರ್ಥ ಮಾಡಿಕೊಳ್ಳಲಾಗಿದೆ. ವಿಭೇದೀಕರಣ ಕ್ರಿಯೆ, ಜೀನುಗಳ ಚಟುವಟಿಕೆಯ ಹರವು ಮುಂತಾದ ಕ್ಲಿಷ್ಟ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇಂದು ಬಹುಮಟ್ಟಿಗೆ ಸಾಧ್ಯವಾಗಿದೆ. 

	ಪ್ರಾಥಮಿಕವಾಗಿ ತಳಿಶಾಸ್ತ್ರದ ಗುರಿ ಅನುವಂಶೀಉ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದೇ ಆಗಿತ್ತು.1930 ರ ವೇಳೆಗೆ ಈ ಗುರಿಯ ಸಾಧನೆ ಸಂಪೂರ್ಣವಾಗಿ ಮುಗಿದಿತ್ತು. ಇದೆ ಕಾಲದಲ್ಲಿ ಜೀನುಗಳ ಕ್ರಿಯೆಯ ಬಗ್ಗೆ ಅನೇಕ ಜೀವವಿಜ್ಞಾನಿಗಳ ಗಮನ ಹರಿದಿತ್ತು.  1923 ರಲ್ಲಿ ಗೆರಾಡ್ ಎಂಬ ವೈದ್ಯ ಅಲ್ ಕ್ಯಾಪ್ಟೋನ್ಯೂರಿಯ ಎಂಬ ಕಾಯಿಲೆಯನ್ನು ಪತ್ತೆಹಚ್ಚಿದ. ಈ ರೋಗಕ್ಕೆ ಹೋಮೋಜೆನಿಸಿಟಿಕ್ ಆಮ್ಲ ಕಾರಣವೆಂದು ಈತ ಕಂಡುಕೊಂಡ.  ಈ ರೋಗದಿಂದ ನರಳುವ ವ್ಯಕ್ತಿ ತನ್ನಲ್ಲಿ ಉತ್ಪತ್ತಿಯಾಗುವ ಹೋಮೋಜೆನಿಸಿಟಿಕ್ ಆಮ್ಲವನ್ನು ಉತ್ಕರ್ಷಿಸಲಾರ.  ಈ ಆವಿಷ್ಕಾರದಿಂದ ತಳಿಶಾಸ್ತ್ರಕ್ಕೆ ಒಂದು ಹೊಸ ತಿರುವು ಸಿಕ್ಕಿತು.  ಈ ರೋಗಕ್ಕೂ ಜೀನ್ ಒಂದಕ್ಕೂ ಸಂಬಂಧ ಇದೆಯೆಂದು ಕಲ್ಪಸಲಾಯಿತು.  ಸುಸ್ಥಿತಿಯಲ್ಲಿದ್ದ ಒಂದು ಜೀನ್ ವಿಕೃತಿಗೊಂಡಿರುವುದೇ ಈ ರೋಗಕ್ಕೆ ಕಾgಣವೆಂದು ತಿಳಿಯಲಾಯಿತು.  ಜೊತೆಗೆ ಜೀನ್ಗಳು ಶರೀರದಲ್ಲಿ ನಡೆಯುವ ಪ್ರತಿಯೊಂದು ರಾಸಾಯನಿಕ ಕ್ರಿಯೆಯನ್ನೂ ತಮ್ಮ ಹಿಡಿತದಲ್ಲಿಟ್ಟು ಕೊಂಡಿರುತ್ತವೆ ಎಂಬುದು ತಿಳಿಯಿತು.  ಹೀಗೆ ತಳಿಶಾಸ್ತ್ರದ ಹೊಸ ಶಾಖೆಯಾದ ರಾಸಾಯನಿಕ ತಳಿಶಾಸ್ತ್ರ ಹುಟ್ಟಿಕೊಂಡಿತು.  ಇದರಿಂದ ಜೀನಿನ ಕಾರ್ಯರಂಗವನ್ನು ಅರ್ಥಮಾಡಿಕೊಳ್ಳಲು ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕಾಯಿತು.  ಇದನ್ನರಿಯಲು ಉನ್ನತವರ್ಗದ ಜೀವಿಗಳಾದ ಇಲಿ, ಮನುಷ್ಯ, ಡ್ರೊಸಾಫಿಲ ಮುಂತಾದವು ಸೂಕ್ತವಲ್ಲ ಎಂದು ತಳಿಶಾಸ್ತ್ರಜ್ಞರು ಆಸ್ಕೊಮೈಸೀಟ್ ಶಿಲೀಂಧ್ರವಾದ ನ್ಯೂರಾಸ್ಪೊರವನ್ನು ತಮ್ಮ ಪ್ರಯೋಗಕ್ಕೆ ಆರಿಸಿಕೊಂಡರು.  ಇದರಲ್ಲಿ ಆಹಾರ ಪೋಷಣೆಗೆ ಸಂಬಂಧಿಸಿದ ಹೊಸ ಹೊಸ ವಿಕೃತಿಗಳನ್ನು ಅಭ್ಯಾಸ ಮಾಡಿ ಒಂದು ಜೀನು ಒಂದು ಕಿಣ್ವ ಎಂಬ ತತ್ತ್ವವನ್ನು ಬೀಡಲ್ ಮತ್ತು ಟಾಟಮ್ ಎಂಬುವರು ಪ್ರತಿಪಾದಿಸಿದರು. ಅಂದರೆ ಒಂದು ಜೀನು ಒಂದು ಕಿಣ್ವದ ಉತ್ಪತ್ತಿ ನಡೆವಳಿಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಇವರು ತಿಳಿಸಿದರು. ಈಗ ಈ ತತ್ತ್ವದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಒಂದು ಜೀನು ಬಹು ಕಿಣ್ವಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರಬಹುದು ಎಂಬ ಅಭಿಪ್ರಾಯವನ್ನು ತಳೆಯಲಾಗಿದೆ.  ಹೀಗೆ ತಳಿಶಾಸ್ತ್ರ ಸಾವಾಕಾಶವಾಗಿ ಅಣುತಳಿಶಾಸ್ತ್ರವಾಗಿ ಮಾರ್ಪಟ್ಟಿದೆ.  ಜೀನಿಗೂ ಅದರಿಂದ ಉತ್ಪತ್ತಿಯಾಗಿವ ವಸ್ತುಗಳಿಗೂ ಇರುವ ಸಂಬಂಧವನ್ನು ವಿಶ್ಲೇಷಿಸಲು ಇದು ಅನುವು ಮಾಡಿಕೊಟ್ಟಿದೆ.  ಜೀನುಗಳ ಜೋಡಣೆಗೂ ಉತ್ಪತ್ತಿಯಾಗುವ ವಸ್ತುಗಳಿಗೂ ಒಂದು ರೀತಿಯ ಸಹರೇಖೀಯ (ಕೋ.ಲೀನಿಯರ್) ಸಂಬಂಧವಿದೆ ಎಂಬುದನ್ನು ಅಣುತಳಿಶಾಸ್ತ್ರ ಶ್ರುತಪಡಿಸಿದೆ.  ಈ ಎಲ್ಲ ಬೆಳೆವಣಿಗೆಗಳಿಂದ ಮೂರು ಅತಿಮುಖ್ಯ ವಿಚಾರಗಳನ್ನು ತಿಳಿಯಲು ಸಹಾಯವಾಗಿದೆ.  ಅವುಗಳೆಂದರೆ : 

1	ಅನುವಂಶೀಯ ವಸ್ತುವಿನ ರಾಸಾಯನಿಕ ರಚನೆ (ಇದು ಆಓಂ ಎಂದು ಗೊತ್ತಾಗಿದೆ) 

2	ಆಓಂ ಎಂಬುದು ಎರಡು ಎಳೆಗಳಿಂದಾಗಿರುವ ಬಹು ನ್ಯೂಕ್ಲಿಯೊಟೈಡುಗಳ ಸರಪಣಿ ಎಂದೂ ಇದರಲ್ಲಿರುವ ಒಂದು ಎಳೆ ಮತ್ತೊಂದು ಎಳೆಗೆ ಪೂರಕ ರೂಪದಲ್ಲಿದೆ ಎಂದೂ ಈ ಸರಪಣಿ ದ್ವಿಕುಂಡಲಿನೀ ರೂಪದಲ್ಲಿದೆ ಎಂಬ ವಿಚಾರ. 

3	ಇನ್‍ಸುಲಿನ್ ಅಣುವಿನಲ್ಲಿ ಇರುವ ಆಮೈನೋ ಆಮ್ಲಗಳ ಸಂಖ್ಯೆ ಹಾಗೂ ಅವುಗಳ ಜೋಡಣೆ. 

	ಕಳೆದ ಹದಿನೈದು-ಇಪ್ಪತ್ತು ಮರ್ಷಗಳ ಸಂಶೋಧನೆಗಳಿಂದಾಗಿ ಅನುವಂಶೀಯ ವಸ್ತುಗಳ ಹೇಗೆ ಆಓಂ ಯಲ್ಲಿ ಅಡಗಿವೆ?  ಅವು ಹೇಗೆ ಪುನರುತ್ಪಾದಿತವಾಗುತ್ತವೆ? ದೂತ ಖಓಂ ಉತ್ಪತ್ತಿ, ಪ್ರೋಟೀನು ಸಂಶ್ಲೇಷಣೆ ಮುಂತಾದ ಮೂಲಭೂತ ಕ್ರಿಯೆಗಳು ಹೇಗೆ ನಸೆಯುತ್ತವೆ ಎಂಬುದರ ಸಮಗ್ರ ಅರಿವು ಈಗ ತಿಳಿದಿದೆ. 

	ಬ್ಯಾಕ್ಟೀರಿಯಗಳ ಮೇಲೆ ನಡೆದಿರುವ ಸಂಶೋಧನೆಗಳಿಂದ ಬ್ಯಾಕ್ಟೀರಿಯ ಕ್ರೋಮೋಸೋಮಿನ ರಚನೆ. ಟ್ರಾನ್ಸ್‍ಡಕ್ಷನ್ ಕ್ರಿಯೆ ಹಾಗೂ ಅದರಿಂದ ನಡೆಯುವ ಜೀನುಗಳ ಅದಲುಬದಲು, ಜೊತೆಗೆ ಬ್ಯಾಕ್ಟೀರಿಯಗಳಲ್ಲಿರುವ ಲೈಂಗಿಕ ಕ್ರಿಯೆ, ಟ್ರಾನ್ಸ್ ಫರ್ಮೇಷನ್ ಕ್ರಿಯೆ ಮುಂತಾದವು ಪೂರ್ಣವಾಗಿ ಬೆಳಕಿಗೆ ಬಂದಿವೆ. 

	ತಳಿಶಾಸ್ತ್ರದ ಮತ್ತೊಂದು ಮುಖ್ಯ ಶಾಖೆ ಎಂದರೆ ಜೀವಿಸಂದಣಿ ತಳಿಶಾಸ್ತ್ರ. ಮೆಂಡಲದ ತತ್ತ್ವಗಳನ್ನು ಜೀವಿಸಂದಣಿಗೆ ಅನ್ವಯಿಸಿ ಅದಕ್ಕೂ ವಿಕಾಸಕ್ಕೂ ಇರುವ ಸಂಬಂಧಗಳನ್ನು ಅರಿಯುವುದಲ್ಲದೆ ಪ್ರಯೋಗಗಳನ್ನು ನಡೆಸಿಯೊ ಇಲ್ಲವೆ ಬಾಹ್ಯ ಪರಿಸರದಲ್ಲಿ ನಡೆಯುತ್ತಿರುವ ಅನುವಂಶೀಯತೆಯ ವಿಧಾನಗಳನ್ನು ಅಭ್ಯಾಸ ಮಾಡಿಯೊ ವಿಕಾಸ ಹೇಗೆ ಆಗುತ್ತದೆ ಎಂಬುದನ್ನು ತಿಳಿಯುವುದು ಇದರ ಮುಖ್ಯ ಗುರಿ.  ವಿಕೃತಿಗಳು, ಅವುಗಳ ಆಯ್ಕೆ, ಜೀನುಗಳ ವಲಸೆ, ಜೀವಿ ಸಂದಣಿಯ ಗಾತ್ರ. ಪರಿಸರದ ವಿಭಿನ್ನತೆಗಳು ಹಾಗೂ ಜೀವಿಸಂದಣಿಯ ಮೇಲೆ ಪರಿಸರ ಬೀರುವ ಪ್ರಭಾವ ಮುಂತಾದ ವಿಚಾರಗಳನ್ನು ಜೀವಿಸಂದಣಿ ತಳಿಶಾಸ್ತ್ರ ಚರ್ಚಿಸಿತ್ತದೆ. 

	ತಳಿಶಾಸ್ತ್ರದ ಅತಿ ಮುಖ್ಯ ಸಾಧನೆಯೆಂದರೆ ಸಂಕರತಳಿಗಳ ಸೃಷ್ಟಿ.  ಇದರಿಂದ ಮನುಷ್ಯನ ಆಹಾರ ಸಮಸ್ಯೆಗಳಿಗೆ ಕೊಂಚ ಪರಿಹಾರ ದೊರಕಿದೆಯಲ್ಲದೆ ವೈದ್ಯಕೀಯ ವಿಜ್ಞಾನದಲ್ಲಿ ಅನುವಂಶೀಯ ರೋಗಗಳ ಬಗ್ಗೆ ಹೆಚ್ಚಿನ ಅರಿವು ಮೂಡಿದೆ.  ಇದರಿಂದಾಗಿ ತಳಿವೈಜ್ಞಾನಿಕ ಸಲಹೆ (ಜೆನೆಟಿಕ್ ಕೌನ್ಸೆಲಿಂಗ್) ಕೊಡುವುದು ಸಾಧ್ಯವಾಗಿದೆ. 

	ತಳಿಶಾಸ್ತ್ರ ಇಂದು ಮಾನವಿಕ ಶಾಸ್ತ್ರಗಳ ನಾನಾ ಪ್ರಾಕಾರಗಳಿಗೆ ಪ್ರವೇಶಿಸಿದೆ. ಸಮಾಜ ಶಾಸ್ತ್ರ, ನೀತಿಶಾಸ್ತ್ರ ಮುಂತಾದ ಪ್ರಾಕಾರಗಳಲ್ಲಿ ತಳಿಶಾಸ್ತ್ರದ ಬಗ್ಗೆ ಸಾಕಷ್ಟು ಚರ್ಚೆ ಪ್ರಾರಂಭವಾಗಿದೆ. ಮನುಷ್ಯ ತನ್ನ ಜೀನುಗಳನ್ನೇ ಮಾರ್ಪಾಟುಗೊಳಿಸಿ ಉತ್ತಮ ತಳಿ ಸೃಷ್ಟಿಗೆ ಕೈಹಾಕುತ್ತಿದ್ದಾನೆ.  ಈಗ ತಳಿಶಾಸ್ತ್ರಜ್ಞರು ಮನುಷ್ಯರಲ್ಲಿ ಶುದ್ಧತಳಿಯ ಸೃಷ್ಟಿ ಮತ್ತು ಜೆನೆಟಿಕ್ ಇಂಜನಿಯರಿಂಗ್‍ಗಳ ಬಗ್ಗೆ ಪ್ರಯೋಗಗಳನ್ನು ಪ್ರಾರಂಭಿಸಿದ್ದಾರೆ. 

	ಜೀನುಗಳ ಸಂಕೇತ ಭಾಷೆಯನ್ನು ತಿಳಿದುಕೊಂಡಿರುವ ಮಾನವ ಜೀವರಸಾಯನ ಶಾಸ್ತ್ರದ ಸಂಶೋಧನೆಗಳ ಮೂಲಕ ಜೀನುಗಳ ಕಾರ್ಯ ಚಟುವಟಿಕೆಗಳ ಚೌಕಟ್ಟನ್ನೇ ತನ್ನ ಇಷ್ಟಕ್ಕೆ ತಕ್ಕಂತೆ ಪುನರ್ ರೂಪಿಸಲು ಪ್ರಯತ್ನಿಸುತ್ತಿದ್ದಾನೆ.  ಇದರಿಂದ ಮನುಷ್ಯನ ಮುಂದಿನ ವಿಕಾಸವನ್ನು ಬೇಕೆಸಿದ ಕಡೆಗೆ ತಿರುಗಿಸಲು ಸಾಧ್ಯವೇ ಎಂಬುದನ್ನು ಅರಿಯಲು ತೀವ್ರವಾಗಿ ಸೆಣಸುತ್ತಿದ್ದಾನೆ.  ಮಾನವರಲ್ಲಿ ಶುದ್ಧತಳಿಯ ಸೃಷ್ಟಿ ಅಥವಾ ಏಕರೀತಿಯಲ್ಲಿರುವ ವ್ಯಕ್ತಿಗಳ ಸೃಷ್ಟಿಯನ್ನು ಸಾಧಿಸಲು ಪ್ರಯತ್ನಗಳು ನಡೆದಿವೆ.  ಪ್ರಪಂಚದ ಅತಿ ಬುದ್ಧವಂತನೊಬ್ಬನನ್ನು ಮಾದರಿಯಾಗಿಟ್ಟುಕೊಂಟು ಆತನ ಜೀವಕೋಶಗಳಿಂದ ಆತನಂತೆಯೇ ಇರುವ ಸಹಸ್ರಾರು ವ್ಯಕ್ತಿಗಳನ್ನು ಸೃಷ್ಟಿಸುವುದು ಈ ಶುದ್ಧ ತಳೀಕರಣದ ಯೋಜನೆ. 

	ಹೆಣ್ಣಿನ ಶರೀರದಿಂದ ಅಂಡವನ್ನು ತೆಗೆದು ಹೊರ ಪ್ರನಾಳದಲ್ಲಿ ನಿಷೇಚಿಸಿ ಅದನ್ನು ಮತ್ತೆ ಗರ್ಭಕೋಶದೊಳಕ್ಕೆ ವರ್ಗಾಯಿಸಿ ಮಕ್ಕಳನ್ನು ಪಡೆಯುವ ಮತ್ತೊಂದು ಕ್ರಮ ಆಗಲೇ ಯುಶಸ್ವಿಯಾಗಿದೆ. 

	ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಸ್ಟೀವರ್ಡ್ ಎಂಬ ವಿಜ್ಞಾನಿ ಗಜ್ಜರಿ ಸಸ್ಯದ ಬೇರುಗಳ ಜೀವಕೋಶಗಳನ್ನು ಒಂದೊಂದಾಗಿ ಬೇರ್ಪಡಿಸಿ ಆ ಒಂದೊಂದು ಕೋಶದಿಂದ ಪಿತೃ ಅಥವಾ ಮಾತೃವಿನಂತೆಯೇ ಇರುವ ಗಜ್ಜರಿ ಗಿಡಗಳನ್ನು ಶುದ್ಧ ತಳೀಕರಣ ಕ್ರಿಯೆಯಿಂದ ಬೆಳೆಸಿದ್ದಾನೆ (1960). ಪ್ರಾಣಿಗಳ ಜೀವಕೋಶಗಳನ್ನು ಈಗ ಕೃಷಿ ಮಾಡಲಾಗುತ್ತಿದೆ.  ಇಂಥ ಕೃಷಿಯಿಂದ ಈ ಜೀವಕೋಶಗಳನ್ನು ಪುನರ್ ವಿಭೇದೀಕರಣಕ್ಕೊಳಪಡಿಸಿ ಪೂರ್ಣ ಪ್ರಾಣಿಯನ್ನು ಪಡೆಯುವ ಹವಣಿಕೆಯೂ ನಡೆದಿದೆ. 

	ಶುದ್ಧ ತಳೀಕರಣ ಕಾರ್ಯದ ಮೂಲಕ ಸಸ್ಯ ಹಾಗೂ ಪ್ರಾಣಿ ತಳಿ ಉತ್ಪಾದನಾ ಕೇಂದ್ರಗಳಲ್ಲಿ ನಿರ್ದಿಷ್ಟ ಅನುವಂಶೀಯ ಗುಣಗಳುಳ್ಳ ತಳಿಗಳನ್ನು ಈಗ ಉತ್ಪಾದಿಸಲಾಗುತ್ತಿದೆ.  ಅತಿ ಹೆಚ್ಚು ಫಸಲು ಕೊಡುವ ಗಿಡಗಳು, ಹೆಚ್ಚು ಹಾಲು ಕೊಡುವ ಹಸು, ಹೆಚ್ಚು ಮೊಟ್ಟೆಯಿಡುವ ಕೋಳಿಗಳನ್ನು ಈಗಾಗಲೇ ಉತ್ಪ್ತಾದಿಸಲಾಗಿದೆ.  ಇದು ಮನುಷ್ಯನ ಹಂತದ ವರೆಗೂ ಬಂದರೆ ಏನಾಗಬಹುದು ಎಂಬುದನ್ನು ಊಹಿಸಲಸಾಧ್ಯ.  ಇದು ಸಾಧ್ಯವಾದಲ್ಲಿ ಅತಿ ಮಾನವ ಸೃಷ್ಟಿ ಸಾಧ್ಯ.  ಅರಿಸ್ಟಾಟಲನಂತ ತತ್ತ್ವಜ್ಞಾನಿಗಳನ್ನು, ಐನ್‍ಸ್ಟೀನ್‍ನಂx ವಿಜ್ಞಾನಿಗಳನ್ನು, ಕ್ಯಾಷಿಯಸ್ ಕ್ಲೇನಂಥ ಶಕ್ತಿವಂತರನ್ನು ಎಷ್ಟು ಬೇಕಾದರೂ ಉತ್ಪಾದಿಸುವ ಮಟ್ಟಕ್ಕೆ ತಳಿಶಾಸ್ತ್ರ ತಲುಪಬಹುದು. ಯಾವುದಾದರೊಂದು ಕುಟುಂಬದಲ್ಲಿ ಇದ್ದ ಒಬ್ಬನೇ ಮಗ ಅಕಸ್ಮಾತ್ತಾಗಿ ಸಾವಿಗೀಡಾದರೆ ಕೆಲವು ಗಂಟೆಗಳ ಅನಂತರ ಆ ವ್ಯಕ್ತಿಯ ಶರೀರದ ಬದುಕಿರುವ ಜೀವಕೋಶಗಳನ್ನು ತೆಗೆದುಕೊಂಡು ಅವನಂತೆಯೇ ಇರುವ ವ್ಯಕ್ತಿಯನ್ನು ಸೃಷ್ಟಿ ಮಾಡಬಹುದು.  ತಳಿಶಾಸ್ತ್ರ ಇಂದು ಈ ಹಂತದವರೆಗೂ ಬಂದಿದೆ. 

	ಜೆನೆಟಿಕ್ ಇಂಜನಿಯರಿಂಗ್ ಮತ್ತು ಈ ಶುದ್ಧತಳೀಕರಣ ಕ್ರಿಯೆಯಿಂದಾಗಿ ಹೊಸ ಹೊಸ ಶಾಖೆಗಳು ಈಗ ತಳಿಶಾಸ್ತ್ರದಲ್ಲಿ ಹುಟ್ಟಿಕೊಂಡಿವೆ.  ಜೀನಿನ ಸಂಕೇತ ಭಾಷೆ. ಅದರ ರಾಸಾಯನಿಕ ಕ್ರಯೆಗಳು ಗೊತ್ತಾದ ಮೇಲೆ ಮಾನವ ವಿಕಾಸ ಕ್ರಿಯೆಯನ್ನು ನಿಯಂತ್ರಿಸುವ ಹಾದಿಯಲ್ಲಿದ್ದಾನೆ.  ಅನುವಂಶೀಯ ರೋಗಗಳ ನಿವಾರಣೆ, ಬೇಡದಿರುವ ಜೀನುಗಳನ್ನು ಕಿತ್ತು ಹೊಸ ಜೀನುಗಳನ್ನು ಕಸಿ ಮಾಡುವ ವಿಧಾನ ಇತ್ಯಾದಿ ಕ್ರಿಯೆಗಳಲ್ಲಿ ಸಾಕಷ್ಟು ಪ್ರಗತಿ  ಸಾಧಿಸಿದ್ದಾನೆ.  (ಎಂ. ಆರ್. ಆರ್. ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ